ಪಟ್ಟದಕಲ್ಲು -
	ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ಉ.ಅ.170 56 ಮತ್ತು ಪೂ.ರೇ. 750 52 ಮೇಲೆ, ಬಾದಾಮಿಗೆ ಸುಮಾರು 22 ಕಿಮೀ. ದೂರದಲ್ಲಿ ಮಲಪ್ರಭಾ ನದಿಯ ಎಡದಂಡೆಯ ಮೇಲೆ ಇದೆ. ಇಲ್ಲಿರುವ ಹತ್ತು ಪ್ರಾಚೀನ ದೇವಾಲಯಗಳಿಂದ ಈ ಊರಿಗೆ ವಿಶೇಷ ಮಹತ್ವ ಬಂದಿದೆ. ನಾಲ್ಕು ಎಕರೆಗಳ ವಿಸ್ತೀರ್ಣದ ಊರಿನ ಸುತ್ತ ಕಲ್ಲಿನ ಗೋಡೆಯಿದೆ. ಇದರ ಪೂರ್ವ ಪಶ್ಚಿಮಗಳಲ್ಲಿ ದ್ವಾರಗಳಿವೆ. ಚಾಳುಕ್ಯರು ತಮ್ಮ ಪಟ್ಟಬಂಧೋತ್ಸವವನ್ನು ಈ ಪಟ್ಟಣದಲ್ಲಿ ಮಾಡಿಕೊಳ್ಳುತ್ತಿದ್ದರೆಂಬುದು ಸಿಂಗಿರಾಜ ಪುರಾಣ(1500), ಹಮ್ಮೀರ ಕಾವ್ಯ (1540), ಇಲ್ಲಿಯ ಚಾಳುಕ್ಯ ಭುವನೈಕ ಮಲ್ಲನ ಶಾಸನ ಇವುಗಳಿಂದ ಗೊತ್ತಾಗುತ್ತದೆ. ಪಟ್ಟದಕಲ್ಲು ಚಾಳುಕ್ಯ ಕೀರ್ತಿವರ್ಮನ ರಾಜಧಾನಿಯಾಗಿತ್ತೆಂದು ಮನಗೂಳಿಯ ಒಂದು ಶಾಸನದಲ್ಲಿ ಉಲ್ಲೇಖವಿದೆ. ಇದು ಕಿಸುವೊಳಲ್ 70ರ ಮುಖ್ಯ ಸ್ಥಳವಾಗಿತ್ತು. ಕಿಸುಕಾಡು 70, ಬಾಗಡಗೆ 70, ಕೆಳವಾಡಿ 300 ಮೊದಲಾದ ಹಲವು ಪ್ರಾಂತ್ಯಗಳನ್ನು ಸಿಂಧಮನೆತನದ 2ನೆಯ ಚಾವುಂಡ ಆಳುತ್ತಿದ್ದ. ಪಟ್ಟದಕಲ್ಲಿನ ನಂದರು, ಗುಪ್ತರು, ಮೋರೆಯರು, ಕದಂಬರು, ಚಾಳುಕ್ಯರು ತಮ್ಮ ಪಟ್ಟಾಭಿಷೇಕ ಸಮಾರಂಭವನ್ನು ನೆರವೇರಿಸಿಕೊಂಡಿದ್ದರೆಂದೂ ಅದರಿಂದಲೇ ಈ ಊರಿಗೆ ಪಟ್ಟದಕಲ್ಲು ಎಂಬ ಹೆಸರು ಪ್ರಾಪ್ತವಾಗಿದೆಯೆಂದೂ ಸಿಂಗಿರಾಜ ಪುರಾಣ ಹೇಳುತ್ತದೆ. ಈ ಊರಿಗೆ ಹಮ್ಮೀರ ನಗರ, ಪಟ್ಟ ಶಿಲಾಪುರ ಎಂಬ ಹೆಸರುಗಳಿದ್ದುದು ಹಮ್ಮೀರ ಕಾವ್ಯದಲ್ಲಿ ವ್ಯಕ್ತವಾಗಿದೆ. ಇದರ ಸುತ್ತಲೂ ಕೋಟೆಯಿತ್ತೆಂದೂ ಇಲ್ಲಿ ನಂದಿ ಧ್ವಜಗಳು ಮೆರೆಯುತಿದ್ದುವೆಂದೂ ಅದೇ ಗ್ರಂಥದಿಂದಲೇ ಸ್ಪಷ್ಟವಾಗಿ ತಿಳಿದು ಬರುತ್ತದೆ.

	ಟಾಲಮಿ ಪಟ್ಟಣದ ಕಲ್ಲನ್ನು ಪೆಟಿರ್ಗಲ ಎಂದು ಕರೆದಿದ್ದಾನೆ. ಹಿಂದೆ ಇದನ್ನು ಕಿಸುವೊಳಲ್ ಎಂದು ಕರೆಯುತ್ತಿದ್ದರು. ಸಂಸ್ಕøತದಲ್ಲಿ ಇದನ್ನು ರಕ್ತಪುರ ಎಂದು ಕರೆಯಲಾಗಿದೆ. ಇದು ಕಿಸುಕಾಡು 70, ಎಂದರೆ ಕಿಸುಕಾಡು ನಾಡಿನಲ್ಲಿಯ 70 ಹಳ್ಳಿಗಳ ಮುಖ್ಯ ಊರು ಆಗಿತ್ತು. ರಾಜೂರು, ಅರಸೀಬೀಡಿ, ಸೂಡಿ ಮುಂತಾದ ಊರುಗಳು ಕಿಸುಕಾಡು ನಾಡಿನಲ್ಲಿ ಸಮಾವೇಶವಾಗಿದ್ದುವು. ಪಟ್ಟದಕಲ್ಲಿನ ಸಂಗಮೇಶ್ವರ ಗುಡಿಯ 2ನೆಯ ಚಾವುಂಡನ ಶಾಸನದಲ್ಲಿ ಈ ಊರಿನ ವರ್ಣನೆ ಚೆನ್ನಾಗಿಬಂದಿದೆ. ಕಿಸುಕಾಡು ಕುಂತಳದೇಶವೆಂಬ ಕಾಂತೆಯ ಹಣೆಯಂತಿತ್ತು. ಅಂಥ ಚೆಲುವಾದ ನಾಡಿಗೆ ಕಿಸುವೊಳಲ್ ಪಟ್ಟಣ ಅಮೂಲ್ಯ ರತ್ನದಂತಿತ್ತು, ಎಂದು ಮುಂತಾಗಿ ಅಲ್ಲಿ ಹೇಳಿದೆ. ಬ್ರಹ್ಮ ವಿಷ್ಣು, ಶಿವರ ಗುಡಿಗಳು ಈ ಊರಲ್ಲಿದ್ದುವು.

	ಕವಿರಾಜಮಾರ್ಗ ಎಂಬ ಲಕ್ಷಣಗ್ರಂಥದಲ್ಲಿ ತಿರುಳ್ಗನ್ನಡನಾಡು ಕೊಪಣ (ಕೊಪ್ಪಳ), ಪುಲಿಗೆ¾(ಲಕ್ಷ್ಮೇಶ್ವರ), ಒಕ್ಕುಂದ ಮತ್ತು ಕಿಸುವೊಳಲ (ಪಟ್ಟದಕಲ್ಲು) ನಡುವಿನ ಪ್ರದೇಶವಾಗಿತ್ತೆಂದು ಹೇಳಿದೆ. ಈ ಊರಿನ ಶೋಭೆ ಮಲಪ್ರಭಾ ನದಿಯಿಂದ ಹೆಚ್ಚಿದೆ. ಈ ನದಿಯ ಪಾತ್ರದಲ್ಲಿ ಹರಿದು ಬಂದ ಅನೇಕ ಪುರಾತನ ಶಿಲಾಯುಧಗಳು ದೊರೆತಿವೆ.

	ಪಟ್ಟದಕಲ್ಲಿನ ಪ್ರಾಚೀನ ದೇವಾಲಯಗಳು ಅವುಗಳ ಪ್ರಾಚೀನತೆ ಮತ್ತು ರಚನೆಗಳಿಂದಾಗಿ ಪ್ರಸಿದ್ಧವಾಗಿವೆ. ಈ ಊರಿನಲ್ಲಿ ಔತ್ತರೇಯ ಮತ್ತು ದ್ರಾವಿಡ ಶಿಖರಗಳುಳ್ಳ ದೇವಾಲಯಗಳಿವೆ. ದ್ರಾವಿಡ ಶಿಖರವುಳ್ಳ ಸಂಗಮೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷ ದೇವಾಲಯಗಳು ಅವುಗಳ ಸಮೀಪದಲ್ಲೆ ನಿಂತ ಔತ್ತರೇಯ ಶೈಲಿಯ, ಶಿಖರಗಳುಳ್ಳ ಗಳಗನಾಥ, ಕಾಶಿವಿಶ್ವೇಶ್ವರ, ಜಂಬುಲಿಂಗ, ಕಾಡಸಿದ್ದೇಶ್ವರ ಗುಡಿಗಳಿಗೆ ಸಮನಾದ ಶೋಭೆಯಿಂದ ಮೆರೆಯುತ್ತಿವೆ. ಪಟ್ಟದಕಲ್ಲು ಔತ್ತರೇಯ ಮತ್ತು, ದ್ರಾವಿಡ ವಾಸ್ತುಶಿಲ್ಪಗಳ ಸಂಗಮಸ್ಥಾನವೆಂದು ವಾಸ್ತುಶಾಸ್ತ್ರಜ್ಞರು ಹೇಳಿದ್ದಾರೆ. ಮುಂದೆ ಈ ಎರಡೂ ವಾಸ್ತು ಪದ್ಧತಿಗಳು ಕೂಡಿ ಕಲ್ಯಾಣದ ಚಾಳುಕ್ಯ ವಾಸ್ತು ಪದ್ಧತಿಯ ಉಗಮಕ್ಕೆ ಕಾರಣವಾದುವು.

	ಪಟ್ಟದಕಲ್ಲಿನಲ್ಲಿ ಪ್ರಾಚೀನವಾದ ಹತ್ತು ದೊಡ್ಡ ದೇವಾಲಯಗಳಿವೆ. ಅವುಗಳಲ್ಲಿ ವಿರೂಪಾಕ್ಷ, ಮಲ್ಲಿಕಾರ್ಜುನ ಮತ್ತು ಪಾಪನಾಥ ದೇವಾಲಯಗಳು ಮುಖ್ಯವಾದವು. ಚಾಳುಕ್ಯ ಮನೆತನದ 2ನೆಯ ಕೀರ್ತಿವರ್ಮ ಮೂರು ಸಲ ಕಾಂಚೀ ಪಟ್ಟಣವನ್ನು ಗೆದ್ದುದರ ಸ್ಮರಣಾರ್ಥವಾಗಿ ಅವನ ಇಬ್ಬರು ಹೆಂಡದಿರು, ಹೈಹಯ ವಂಶದ ರಾಜ ಪುತ್ರಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು, ಗುಡಿಗಳನ್ನು ಕಟ್ಟಿಸಿ ಅವುಗಳಲ್ಲಿ ತಮ್ಮ ಹೆಸರಿನ ಲೋಕೇಶ್ವರ, ತ್ರೈಲೋಕೇಶ್ವರ ಎಂಬ ಲಿಂಗಗಳನ್ನು ಸ್ಥಾಪಿಸಿದ್ದಾರೆ.

	ಲೋಕೇಶ್ವರನ ಗುಡಿ, ಎಂದರೆ ಈಗಿನ ವಿರೂಪಾಕ್ಷ ದೇವಾಲಯ, ಪಟ್ಟದಕಲ್ಲಿನ ಗುಡಿಗಳ ಪೈಕಿ ಅತ್ಯಂತ ದೊಡ್ಡದು ಮತ್ತು ಆಕರ್ಷಕವಾದ್ದು. ಅದಕ್ಕೆ ಪ್ರಾಕಾರದ ಗೋಡೆ, ಅದರೊಳಗೆ ಪ್ರವೇಶಿಸಲು ಎರಡು ಮಹಾದ್ವಾರಗಳು, ಪ್ರತ್ಯೇಕವಾದ ನಂದಿ ಮಂಟಪ, ಮೂರು ಅರ್ಧ ಮಂಟಪಗಳು (ಬ್ರಹ್ಮ, ವಿಷ್ಣು, ಮಹೇಶ್ವರರಿಗೆ), ಮಂಟಪ, ಮುಖ್ಯ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥ ಮತ್ತಿತರ ಎರಡು ಗರ್ಭಗುಡಿಗಳು ಇವೆ. ಈ ದೇವಾಲಯ ನದಿಯ ದಂಡೆಯ ಮೇಲೆ ಪೂರ್ವಾಭಿಮುಖವಾಗಿದೆ. ಇದರ ಮೇಲೆ ದ್ರಾವಿಡ ಪದ್ಧತಿಯ ಚೌಕವಾದ ಶಿಖರವಿದೆ. ಶಿಖರದ ಮೆಟ್ಟಿಲುಗಳು ಬಿಡಿಯಾಗಿ ಒಂದರ ಮೇಲೊಂದು ಕಿರಿದಾಗುತ್ತ ಅಡ್ಡರೇಖಾಕಾರವಾಗಿಹೋಗಿವೆ. ದೇವಾಲಯದ ಹೊರಗೋಡೆಗೆ ಉತ್ತಮವಾಗಿ ಕೆತ್ತಿದಕಲ್ಲಿನ ಕಿಟಕಿಗಳು ಮತ್ತು ಮಾಡಗಳಿವೆ. ಅವುಗಳಲ್ಲಿ ಶೈವ ವೈಷ್ಣವ ದೇವರುಗಳನ್ನಿಡಲಾಗಿದೆ. ರಾವಣ ಜಟಾಯುವನ್ನು ಸಂಹರಿಸುವುದು, ಕೈಲಾಸ ಪರ್ವತವನ್ನು ರಾವಣ ಎತ್ತುವುದು, ಗಜೇಂದ್ರಮೋಕ್ಷ ಮೊದಲಾದ ದೃಶ್ಯಗಳು ವಿರೂಪಾಕ್ಷ ದೇವಾಲಯದ ಹೊರಮಗ್ಗಲಲ್ಲಿ ಕಂಡುಬರುತ್ತವೆ. ಇದರ ಪೂರ್ವ ಮುಖಮಂಟಪದೊಳಗೆ ದ್ವಾರಪಾಲಕರಮುರ್ತಿ, ಶಂಖನಿಧಿ ಪದ್ಮನಿಧಿಗಳು, ರಸಿಕ ದಂಪತಿಗಳು ಇತ್ಯಾದಿಗಳಿವೆ. ಇಲ್ಲಿ ವಾಸ್ತು ಮತ್ತು ಮೂರ್ತಿಶಿಲ್ಪಗಳು ಒಂದಕ್ಕೊಂದು ಹೊಂದಿಕೊಂಡಿವೆ. 8-9ನೆಯ ಶತಮಾನದಲ್ಲಿ ಬರೆದ ಕೆಲವು ಶಾಸನಗಳೂ ಇಲ್ಲಿ ಇವೆ. ಇವೆಲ್ಲವೂ ದೇವಾಲಯದ ನಿರ್ಮಾಣದ ಅಥವಾ ಅದರ ಸಮೀಪದ ಕಾಲದವು ಎಂದು ಹೇಳಬಹುದು.

	ವಿರೂಪಾಕ್ಷ ದೇವಾಲಯದಲ್ಲಿಯ ಮೂರ್ತಿಗಳು ಬಹು ಸುಂದರವಾಗಿವೆ. ದಕ್ಷಿಣ ಗೋಡೆಯ ಮೇಲಿನ ನಟರಾಜ, ಜಟಾಧಾರಿ ಶಿವ (ಇದನ್ನು ಚೆಂಗಮ್ಮನೆಂಬ ಶಿಲ್ಪಿ ನಿರ್ಮಿಸಿದ). ಲಕುಳೀಶ, ಉತ್ತರ ಗೋಡೆಯ ಮೇಲಿನ (ಪುಲ್ಲಪ್ಪನ್ ನಿರ್ಮಾಣದೇವ ತಯಾರಿಸಿದ) ಶಿವ, ನಂದಿಗೆ ಆತು ತ್ರಿಭಂಗಿಯಲ್ಲಿ ನಿಂತಿರುವ ಶಿವ, ದಕ್ಷಿಣಾಪ್ರಾಕಾರದ ಗೋಡೆಯ ಒಳಮಗ್ಗಲಲ್ಲಿರುವ ಗಜಾಸುರಾಂತಕ ಮೂರ್ತಿ, ದಕ್ಷಿಣ ಅರ್ಧಮಂಟಪದೊಳಗಿನ ಒಬ್ಬ ದ್ವಾರಪಾಲಕ (ಇದನ್ನು ಬಲ ದೇವಯ್ಯ ನಿರ್ಮಿಸಿದ) ಮುಂತಾದವು ನಿದರ್ಶನಗಳು. ಇವುಗಳಲ್ಲದೆ ಮಂಟಪ ಗೋಡೆಯ ಹತ್ತಿರದ ಅರೆಗಂಬಗಳ ಕೆಳಭಾಗದಲ್ಲಿರುವ ರಸಿಕ ದಂಪತಿಗಳ, ಮತ್ತು ಕಂಬಗಳ ಮೇಲಿನ ಅಹಲ್ಯೆ ತಿಲೋತ್ತಮೆ ಇಂದ್ರ ವಜ್ರರ ಚಿತ್ರಗಳು, ರಾಮಾಯಣ ಮಹಾಭಾರತಗಳ ದೃಶ್ಯಗಳು, ಸಮುದ್ರಮಂಥನ, ಭಗೀರಥನ ತಪಸ್ಸಿಗೆ ಮೆಚ್ಚಿ ದೇವಗಂಗೆ ಭೂ ಲೋಕಕ್ಕೆ ಬಂದದ್ದು ಮುಂತಾದ ದೃಶ್ಯಗಳು ಮನೋಹರವಾಗಿವೆ. ಇವುಗಳಲ್ಲಿ ಕೆಲವು ಕೃತಿಗಳ ಸಮೀಪದಲ್ಲಿ ಆ ದೃಶ್ಯಗಳನ್ನು ಗುರುತಿಸಲು ನೆರವಾಗಿ ಚಿಕ್ಕ ಲಿಪಿಗಳನ್ನು ಬರೆದಿದೆ.

	ಮಲ್ಲಿಕಾರ್ಜುನ ಗುಡಿಯ ರಚನೆಯ ಕಾಲ 8 ನೆಯ ಶತಮಾನದ ಪೂರ್ವಾರ್ಧ. ಅದು ತಲ ವಿನ್ಯಾಸದಲ್ಲಿ ಮತ್ತು ಮೂರ್ತಿಗಳನ್ನು ತಯಾರಿಸುವ ಕ್ರಮದಲ್ಲಿ ವಿರೂಪಾಕ್ಷ ದೇವಾಲಯವನ್ನು ಬಹುಮಟ್ಟಿಗೆ ಹೋಲುತ್ತದೆ. ಅಲ್ಲಿಯ ನಂದಿ ಮಂಟಪ ಸಣ್ಣದು. ಇದಕ್ಕೆ ಇದ್ದ ಪ್ರಾಕಾರದ ಗೋಡೆ ಬಿದ್ದುಹೋಗಿದೆ. ವಿರೂಪಾಕ್ಷ ಗುಡಿಯಂತೆಯೇ ಇಲ್ಲಿಯೂ ಮೂರು ಗರ್ಭ ಗುಡಿಗಳಿವೆ. ಅವುಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಸ್ಥಾಪಿಸಿದ್ದರೆಂದು ಊಹಿಸಬಹುದು. ಮುಖ್ಯ ಗರ್ಭಗುಡಿಯಲ್ಲಿ ಲಿಂಗವಿದೆ. ವಿರೂಪಾಕ್ಷ ಗುಡಿಯ ಮುಖ್ಯ ಗರ್ಭಗುಡಿಯಲ್ಲೂ ಲಿಂಗವಿದೆ. ಮಲ್ಲಿಕಾರ್ಜುನ ಗುಡಿಯ ಮಹಾಮಂಟಪದೊಳಗಿನ ಕಂಬಗಳ ಮೇಲೂ ರಾಮಾಯಣ ಭಾರತ ಪಂಚತಂತ್ರ ಮೊದಲಾದವುಗಳ ಸನ್ನಿವೇಶಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಈ ಗುಡಿಯಲ್ಲಿಯ ಮೂರ್ತಿಗಳು ಸುಸಂಬದ್ಧ ಮತ್ತು ನಿಯಮಿತ ಅಳತೆಗೆ ಒಳಗಾಗಿ ಹಾವಭಾವಪೂರ್ಣವಾಗಿವೆ. ಈ ದೇವಾಲಯಕ್ಕೆ ದ್ರಾವಿಡ ಶಿಖರವಿದ್ದರೂ ಅದರ ಮೇಲ್ಭಾಗ ವಿರೂಪಾಕ್ಷ ಗುಡಿಯದರಂತೆ ಚೌಕವಾಗಿರದೆ ದುಂಡಗಿದೆ.

	ಕಾಶಿವಿಶ್ವೇಶ್ವರ ದೇವಾಲಯ ಮಲ್ಲಿಕಾರ್ಜುನನ ಗುಡಿಯ ಉತ್ತರಕ್ಕೆ ಭವ್ಯವಾದ ಔತ್ತರೇಯ ಶಿಖರದೊಂದಿಗೆ ತಲೆಯೆತ್ತಿ ನಿಂತಿದೆ. ಈ ಶಿಖರದ, ಮತ್ತು ಅದೇ ಪ್ರಕಾರ ಔತ್ತರೇಯ ಶಿಖರವುಳ್ಳ ಗಳಗನಾಧ ದೇವಾಲಯದ ಅಲಂಕಾರದಲ್ಲಿ ಭಿನ್ನತೆ ಕಂಡುಬರುತ್ತದೆ. ಔತ್ತರೇಯ ಪದ್ಧತಿಯ ಈ ಗುಡಿಯಲ್ಲಿ ದ್ರಾವಿಡ ವಾಸ್ತು ಶಿಲ್ಪವನ್ನು ಕೆತ್ತುವ ಪ್ರಯತ್ನ ಮಾಡಲಾಗಿದೆ. ಈ ಗುಡಿ ಅಷ್ಟು ದೊಡ್ಡದಲ್ಲ. ಗರ್ಭಗುಡಿಯ ಬಲಗಡೆ ನಿಂತ ದ್ವಾರಪಾಲಕನಿಗೆ ಮೂರು ಕಣ್ಣುಗಳು, ಕೋಡಿನ ಆಭರಣಗಳು ಇವೆ. ಎಡಗಡೆಯ ದ್ವಾರಪಾಲಕನಿಗೆ ಜಟಾಧಾರಿಯಾಗಿ, ಎಡದ ಮೇಲ್ಮೈಯಲ್ಲಿ ಪರಶುಧರಿಸಿದ್ದಾನೆ. ಇದರ ಮಂಟಪದ ಕಂಬಗಳ ಮೇಲೆ ಕೃಷ್ಣನ ಲೀಲೆಗಳನ್ನೂ ಶಿವ ತ್ರಿಪುರವನ್ನು ನಾಶಮಾಡುತ್ತಿರುವ, ಗಜಾಸುರನನ್ನು ಸಂಹರಿಸುತ್ತಿರುವ ದೃಶ್ಯಗಳನ್ನೂ ಕೆತ್ತಿದೆ. ಹೊರಗೋಡೆಗಳ ಮೇಲ್ಭಾಗದಲ್ಲಿ ಕುಬ್ಜ ಗಣಗಳು ಮಾಲೆ ಹೊತ್ತು ಹಾರುತ್ತಿರುವಂತೆ ತೋರಿಸಿದೆ.

	ಸಂಗಮೇಶ್ವರನ ಗುಡಿಯ ಮೊದಲನೆಯ ಹೆಸರು ವಿಜಯೇಶ್ವರ ದೇವಾಲಯ. ಇದನ್ನು ಚಾಳುಕ್ಯ ವಿಜಯಾದಿತ್ಯ 696-733ರಲ್ಲಿ ಕಟ್ಟಿಸಿ ಅದರಲ್ಲಿ ತನ್ನ ಹೆಸರಿನ ವಿಜಯೇಶ್ವರ ಲಿಂಗವನ್ನು ಸ್ಥಾಪಿಸಿದ್ದಾನೆ. ಈ ಗುಡಿಗೆ ದಪ್ಪವಾದ ಮತ್ತು ಚೌಕನೆಯ ಕಲ್ಲು ಕಂಬಗಳಿವೆ. ಅವುಗಳ ಹತ್ತಿರ ಇಂಥಿಂಥವರು ನಿಲ್ಲಬೇಕೆಂಬ ಸಂಕೇತವಿದ್ದರಬೇಕೆಂದು ತೋರುತ್ತದೆ. ಇಲ್ಲಿ ಕೆಲವು ಶಾಸನಗಳಿವೆ. ಈ ಗುಡಿಯ ಮಂಟಪದಲ್ಲಿ ಒಂದು ದೊಡ್ಡ ಶಿಲಾಶಾಸನವಿದೆ. ಅದರಲ್ಲಿ ಪಟ್ಟದಕಲ್ಲಿನ ಪ್ರಾಕೃತಿಕ ವರ್ಣನೆ ಇದೆ. ಎರಂಬರಿಗೆ ಸಿಂದ ಮನೆತನದ 2ನೆಯ ಚಾವುಂಡನ ಹೆಂಡತಿ ದೇವಲದೇವಿ ಮತ್ತು ಕುಮಾರ ಆಚಿದೇವ ಕಿಸುವೊಳಲನ್ನು ಕುಮಾರವೃತ್ತಿಯಿಂದ ಆಳುತ್ತಿದ್ದ ವೇಳೆಯಲ್ಲಿ ದಕ್ಷಿಣವಾರಾಣಾಸಿಯೆಂದು ಹೆಸರಾದ ಕಿಸುವೊಳಲ (ಪಟ್ಟದ ಕಲ್ಲ) ಶ್ರೀ ವಿಜಯೇಶ್ವರ ದೇವರ ಅಂಗ-ರಂಗಭೋಗಕ್ಕೆ 300 ಮತ್ತರ ಭೂಮಿಯನ್ನು ಕೊಟ್ಟರು. ಉಳಿದವರು ಕೊಟ್ಟ ದತ್ತಿಗಳ ಉಲ್ಲೇಖ ಸಹ ಇದರಲ್ಲಿದೆ. ಗಳಗನಾಥ ಗುಡಿಯೂ ಈ ಊರಿನ ಗುಡಿಗಳಂತೆ ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಇದಕ್ಕೆ ಎತ್ತರವಾದ ಔತ್ತರೇಯ ಶಿಖರ ಇರುವುದೇ ಇದರ ವೈಶಿಷ್ಟ್ಯ. ಈ ಗುಡಿಯ ದಕ್ಷಿಣ ದಿಕ್ಕಿನ ಮಂಟಪದಲ್ಲಿ ಅಂಧಕಾಸುರಾಮತಕನ (ಶಿವ)ಮೂರ್ತಿ ಇದೆ. ಇವನು ಕಪಾಲಮಾಲೆ ಧರಿಸಿದ್ದಾನೆ.

	ಪಾಪನಾಥನದು ಮೂಲತಃ ಒಂದು ಶೈವಗುಡಿ. ಇದಕ್ಕೆಪೂರ್ವ ಅರ್ಧ ಮಂಟಪ ಉತ್ತರ ಪಶ್ಚಿಮ ದಕ್ಷಿಣ ದಿಕ್ಕುಗಳ ಗುಡಿಯೊಳಗೆ ಪ್ರವೇಶವಿಲ್ಲದ ಅರ್ಧ ಮಂಟಪಗಳು, ಮಂಟಪ, ಸುಕನಾಸಿ ಅಥವಾ ಒಳಮಂಟಪ, ಪ್ರದಕ್ಷಿಣಾಪಥ, ಗರ್ಭಗುಡಿ ಇತ್ಯಾದಿ ಭಾಗಗಳಿವೆ. ಇದರ ಉದ್ದ ಮತ್ತು ಎತ್ತರ ಪ್ರಮಾಣಬದ್ಧವಾಗಿಲ್ಲ. ಇದರ ಮೇಲೆ ಚಿಕ್ಕ ಔತ್ತರೇಯ ಶಿಖರವಿದೆ. ಗರ್ಭಗುಡಿಯಲ್ಲಿ ಶಿವ ಲಿಂಗವುಂಟು. ಈ ಗುಡಿಯ ಮಂಟಪದ ಕಂಬಗಳ ಕೆಳಗೆ ವಿರೂಪಾಕ್ಷನ ಮತ್ತು ಮಲ್ಲಿಕಾರ್ಜುನನ ಗುಡಿಗಳಲ್ಲಿರುವಂತೆ ರಸಿಕ ದಂಪತಿಗಳ ವಿಗ್ರಹಗಳಿವೆ. ಇವನ್ನು ಸುಂದರವಾಗಿ ಕೆತ್ತಿದ್ದಾರೆ. ದಶರಥ ಪುತ್ರಕಾಮೇಷ್ಠಿಯಾಗ ಮಾಡಿದ್ದರಿಂದ ಹಿಡಿದು ರಾಮ ಪಟ್ಟಾಭಿಷೇಕದವರೆಗಿನ ದೃಶ್ಯಗಳನ್ನು ದಕ್ಷಿಣದ ಹೊರಗೋಡೆಯ ಮೇಲೆ ಕಲ್ಲಿನಲ್ಲಿ ಕೆತ್ತಿದ್ದಾರೆ. ರಾವಣ, ಶೂರ್ಪಣಖಾ, ಬಾಲಿ (ವಾಲಿ) ಮುಂತಾದವರ ಮೂರ್ತಿಗಳ ಹತ್ತಿರ 7ನೆಯ ಶತಮಾನದಲ್ಲಿ ಬರೆದ ಕಿರುಶಾಸನಗಳಿವೆ. ಅವು ಆಯಾ ಮೂರ್ತಿಗಳಾವುವೆಂದು ತಿಳಿಸುತ್ತವೆ. ಉತ್ತರದ ಗೋಡೆಯ ಮೇಲೆ ಶಬರ ರೂಪಧಾರಿಯಾದ ಶಿವನಿದ್ದಾನೆ. ಗುಡಿಯ ಅರ್ಧ ಮಂಟಪದ ಛತ್ತಿನಲ್ಲಿ ಪಾರ್ವತೀ ಸಮೇತನಾದ ನಟರಾಜ, ಮಂಟಪದ ಛತ್ತಿನಲ್ಲಿ ನಟರಾಜ ಮತ್ತು ನಾಗ ಇದ್ದಾರೆ.

	ಪುರಾತನ ಜೈನ ಗುಡಿ ಊರಿನ ಹೊರಗೆ ಪಶ್ಚಿಮದ ಕಡೆಗೆ ಇದೆ. ಇದರ ರಚನೆಯ ಕಾಲ ಸುಮಾರು 10ನೆಯ ಶತಮಾನ. ಎದುರಿನ ಅರ್ಧಮಂಟಪದಲ್ಲಿ ನಿಜಾಕಾರದ ಎರಡು ಆನೆಗಳ ಮೇಲೆ ಮಾವುತರು ಕುಳಿತಿದ್ದಾರೆ. ಇವುಗಳ ಮಾಟ ಸುಂದರವಾಗಿದೆ. ಗುಡಿಯ ಹೊರಗೋಡೆಯ ಮೇಲೆ ಮೂರ್ತಿಯಿಲ್ಲ. ಈ ಗುಡಿಗೆ ಗರ್ಭಗುಡಿಯ ಮೇಲೆ ಮತ್ತೊಂದು ಗರ್ಭಗುಡಿಯಿದೆ. ಅಲ್ಲಿಗೆ ಹೋಗಲು ಪ್ರಾಚೀನ ನಿಚ್ಚಣಿಕೆಯಿದೆ.

	ಪಟ್ಟದಕಲ್ಲು ರೇವಡಿ ಒವಜ್ಜ, ಅನಿವಾರಿತಗುಂಡ ಎಂಬ ಸ್ಥಪತಿಗಳಿಂದ, ಚೆಂಗಮ್ಮ, ಪುಲ್ಲಪ್ಪನ್ ನಿರ್ಮಾಣದೇವ, ಬಲದೇವಯ್ಯ, ದೇವ ಆರ್ಯ ಮೊದಲಾದ ಶಿಲ್ಪಿಗಳಿಂದ, ಅಚಲನ್ ಮುಂತಾದ ನಾಟ್ಯಶಾಸ್ತ್ರ ಪ್ರವೀಣರಿಂದ, ಚಲಬ್ಬೆ ಮೊದಲಾದ ದೇವದಾಸಿಯರಿಂದ ಕೂಡಿ ಕಲಾಪೂರ್ಣವಾಗಿತ್ತು.							   (ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ